Pages

Subscribe:

Friday, August 8, 2014

ಪ್ರೇಮ ಬಲಿತಾಗ

ಒಳಗೊಳಗೇ ಅವಿತ ಪ್ರೇಮ ಹೇಗೋ ಬಲಿತಿದೆ
ಅತ್ತ ಮುಚ್ಚಿಡಲಾಗದೆ ಇತ್ತ ತೆರೆದಿಡಲಾಗದೆ 
ಒಳಗೊಳಗೆ ಮಧುರ ಸಂಕಟ ನೀಡಿದೆ 

ಮಾತಲಿ ಮೌನವಾಗಿದೆ, ಮೌನದಲಿ ಪಿಸುಗುಟ್ಟಿದೆ 
ಮಳೆಗಾಳದಿ ಭೋರ್ಗರೆವ ಜಲಧಾರೆಯಂತೆ 
ಕಲ್ಪನೆಯ ಕಾವ್ಯವಾಗಿ ದುಮ್ಮಿಕ್ಕುತಿದೆ 

ಅದೆಷ್ಟು ದಿನ ಸ್ನೇಹದ ಪರಿಧಿ ಎಂಬ ಆಣೆಕಟ್ಟು 
ಎನ್ನೊಳಗಿನ ಒಲುಮೆಯ ಅಗಾಧ ಜಲಾಶಯವ 
ತಡೆಹಿಡಿದು ಕಾಪಾಡುತ್ತೋ ಹೃದಯದೇವನೇ ಬಲ್ಲ 

- ವರುಣ್  ಕಂಜರ್ಪಣೆ 

Monday, July 7, 2014

ಒಮ್ಮೆ ನೀ ಉತ್ತರಿಸಿಬಿಡು

ಎನ್ನೆದೆಯಲಿ ರಂಗು ಮೂಡಿಸಿದ ಮದರಂಗಿ ಆಕೆ
ಬದುಕಿನ ಕಾನನದಿ ಚಿತ್ತಾರ ಬರೆದ ಕಾಮನಬಿಲ್ಲು ಆಕೆ
ಮನದ ಗೂಡಲಿ ಸಂತಸದ ಸಂಗೀತವ ಗುನುಗಿದವಳು ಆಕೆ
ಕಣ್ರೆಪ್ಪೆ ಮುಚ್ಚಿದಾಗ ಬರೋ ಸುಂದರ ಚಿತ್ರದಲೂ ಇರವಳು ಆಕೆ
ಕೇಳಬೇಕೆಂದಿರುವೆ ಯಾವಾಗ ನೀ ಬಳಿಸಾರಿ ಬಂದು ಆಗುವೆ...? ನನ್ನಾಕೆ !

Friday, June 20, 2014

ಒಂದು ಕನಸು - ಹಾಳಾದ ಮನಸು

ಗಾಢ ನಿದ್ರೆಯಲ್ಲಿದ್ದ ಎನಗೆ 
ಕನಸಿನ ಪರದೆಯಲಿ ಬಂದಿದ್ದಳಾಕೆ.. 
ಆಕೆ ಕನಸಿಲಿ ಎನ್ನ ಮುದ್ದಿಸಿ ಇತ್ತ ಒಂದು ಮುತ್ತು 
ಎನ್ನ ಗರಬಡಿದವನಂತೆ ಒಂದೇ ಸಾರಿ ಎಬ್ಬಿಸಿತ್ತು... 

ಮಾತೇ ಹೊರಬರುತ್ತಿರಲಿಲ್ಲ.. 
ಹರುಷವೋ, ಮುನ್ಸೂಚನೆಯೋ.. 
ಸವಿಯಾದ ಹುಸಿಗನಸೋ ತಿಳಿಯುತಿಲ್ಲ... 

ಆಕೆಗೂ ಒಂದಿಲ್ಲೊಂದು ದಿನ.. 
ಇಂತಹುದೇ ಕನಸು ಬಿದ್ದಿರಬಹುದೇನೋ ಅನ್ನುವ
ಕುತೂಹಲ ಕೂಡ ತಣಿಯುತಿಲ್ಲ... 

ಹಾಗಂತ ನಿನಗೂ ಈ ರೀತಿ
ಸಿಹಿಗನಸು ಬಿದ್ದಿತ್ತೇ ಎಂದು ಕೇಳೋಣವೆಂದರೆ
ಹಾಳಾದ ಧೈರ್ಯವೇ ಸಾಲುತಿಲ್ಲ 

- ವರುಣ್ ಕಂಜರ್ಪಣೆ 

Thursday, February 27, 2014

ಸಿಹಿ ಮಿಡಿತ

ಆಕೆಯ ಕಂಡೊಡನೆ ಕಣ್ಣೆರಡು ಮಿಂಚ ಹರಿಸಿತ್ತು
ಒಳಗೊಳಗೇ ಮನದ ಹಕ್ಕಿ ಬಾಂದಳವ ತಲುಪಿತ್ತು
ಹೃದಯವದು ಒಲುಮೆಗೀತೆಯ ಸೃಷ್ಟಿಸಿತ್ತು
ಕಂಠದಾಳದಿ ಖುಷಿಯ ರಾಗ ಮೂಡಲು ಸಿದ್ದವಾಗಿತ್ತು
ಹತ್ತಾರು ಜನುಮದ ಕನಸು ಎಳೆ ಎಳೆಯಾಗಿ ಕಾಣತೊಡಗಿತ್ತು
ಕಿವಿಯಂಚಲಿ ಆಕೆಯ ಹೆಜ್ಜೆ ದನಿ ಮೊರೆಯುತ್ತಿತ್ತು

ಮೈಮರೆತ ಭಾವಗಳ ಗುಂಗಿಗೆ ಒಳಗಿನ ಪ್ರಜ್ಞೆ ಕೂಗಿ ಹೇಳಿತ್ತು
ಮನದಾಳದ ಮಾತುಗಳೆಲ್ಲ ದನಿಯಾಗೋದಿಲ್ಲ....
ಕಂಡ ಕನಸುಗಳೆಲ್ಲಾ ನನಸಾಗೋದಿಲ್ಲ....
ಆದರೂ ಹೃದಯದ ಸಿಹಿ ಮಿಡಿತ ಕಡಿಮೆಯಾಗಲೇ ಇಲ್ಲ !!

- ವರುಣ ಕಂಜರ್ಪಣೆ.

Tuesday, October 1, 2013

ಹುಚ್ಚು ಪ್ರೀತಿ - ಇದೇ ರೀತಿ

ಹುಚ್ಚು ಪ್ರೀತಿ - ಇದೇ ರೀತಿ


ಅಂದು
ನೀನೆಷ್ಟು ಒಳ್ಳೆಯವನೆಂದು ಮೆದುವಾಗಿ ಮುಖ ಮುಟ್ಟಿ
ಬಾಚಿ ತಬ್ಬಿಕೊಂಡ ಆಕೆ,
ಮನದಲೇ ತನ್ನಿಂದ ನಿನಗೆ ಎಲ್ಲಿ ನೋವಾಗಬಹುದೋ
ಎಂದು ನೊಂದುಕೊಂಡ ಆಕೆ,
ಪ್ರತೀ ಮಾತಲು ಖುಶಿ ಹುಡುಕಿ ಮನದಲೇ
ಮುದಗೊಂಡ ಆಕೆ,
ಎಂದೂ ಬತ್ತದ ಜೀವ ಸೆಲೆಯಂತೆ ಮುತ್ತಿಟ್ಟು
ಎದೆಯೋಳಗಿಳಿದ ಆಕೆ,


ಇಂದು
ತುಂಬಾ ಒಳ್ಳೆಯವನಾದ ನೀನು ಎನ್ನ ಒಲವ
ಪಡೆಯಲಾರೆ ಎಂದು ಖಟು ನುಡಿದಳಾಕೆ.
ಖುಶಿಯ ಬಟ್ಟಲಲಿ ಹೇಗೋ ದ್ವೇಷದ ಕಲ್ಲ ಹುಡುಕಿ
ಎದೆ ಬಗಿದು ಜೀವವ ಪಾತಾಳಕೆ ಹುಗಿದು ಹೋದಳಾಕೆ.

ಆದರೂ ಎದೆಯಲಿ ಬತ್ತಿಲ್ಲ ಈ ಹುಚ್ಚು ಪ್ರೀತಿ
ನೆನಪಿನಂಚಲಿ ಅಚ್ಚಳಿಯದೆ ನಿಂತಿದೆ ಅದ ಆಕೆ ಕೊಟ್ಟ ರೀತಿ.
ಬದುಕು ಬರಡಾಗೋ ಮೊದಲು ಅನುರಾಗದ ಸೋನೆ
ಮತ್ತೆ ಸುರಿಯುವ ಆಸೆ ಮಾತ್ರ ಇನ್ನೂ ಹಸಿರಾಗೇ ಇದೆ.




Monday, September 23, 2013

ಮುರುಕು ಮನೆಯ ಮುದುಕ

ಆ ಮುರುಕು ಮನೆಯ ಮುದುಕ ಆಗಸದ ಅಂಚಲಿ ಮಾಸಿದಂತೆ ಕಂಡ, ಕಹಿ ಶಕುನ ನುಡಿದ ಚುಕ್ಕಿಯ ಕಂಡು ವ್ಯಂಗ್ಯದಿಂದ ಮುಗುಳ್ನಕ್ಕನಂತೆ. ಮಾಸಿದ ಚುಕ್ಕಿ ನಾಳೆ ಮತ್ತೆ ಬೆಳಗುತ್ತೆ, ಆದ್ರೆ ಪಾಪ ಮುದುಕ !!!

Wednesday, August 14, 2013

ಚೆಲುವೆ ಯಾಕೆ ಬಂದೆ ನನ್ನ ಕಣ್ಣ ಮುಂದೆ - 2


ಸುತ್ತಲೂ ಮಬ್ಬಿರಲು 
ಮನದೊಳಗೆ ಕಹಿಯಿರಲು
ಸುಲಿಯೊಳಗೆ ಸಿಲುಕಿರಲು
ದನಿ ಆಳದಿ ಅಡಗಿರಲು
ನೆನಪುಗಳು ಕಾಡಿರಲು 
ಮತ್ತದೇ ಪ್ರಶ್ನೆ
ಚೆಲುವೆ ಯಾಕೆ ಬಂದೆ ನನ್ನ ಕಣ್ಣ ಮುಂದೆ.. ??