Pages

Subscribe:

Sunday, April 26, 2015

ನೀನೆಂದೂ ನಿಜವಾದ ನನ್ನ ನೋಡೇ ಇಲ್ಲ...!!

 ಮೂರು ವರ್ಷದ ಹಿಂದಿನ ಮಾತು.. ಒಂದು ದಿನ ನಾನು ನಿನ್ನ ಫೋಟೋವನ್ನು ಫೇಸ್​ಬುಕ್​ನಲ್ಲಿ ನೋಡಿದ್ದೆ.. ಮೊದಲ ನೋಟಕ್ಕೆ ನೀನು ಇಷ್ಟವೂ ಆಗಿದ್ದೆ.. ಅದೇನೋ ಕ್ರಶ್​ ಅಂತಾರಲ್ಲ, ಅದಾಗಿತ್ತು ಅನಿಸುತ್ತೆ.. ನಿನ್ನ ಫೋಟೋವನ್ನು ಇನ್ನಷ್ಟು ಸುಂದರಗೊಳಿಸಿ ನಿನಗೇ ಕಳುಹಿಸಿಕೊಟ್ಟೆ.. ನಿನಗೂ ಇಷ್ಟವಾಗಿತ್ತು.. ನನ್ನ ಮನ ಕುಣಿದಿತ್ತು.. ಹಾಗೇ ನಿನ್ನ ಜೊತೆಗಿನ ಬಾಂಧವ್ಯ ಬೆಳೆದಿತ್ತು...

 ಒಂದೂವರೆ ವರ್ಷದ ಬಳಿಕ ನಮ್ಮಿಬ್ಬರ ಮಾತುಕತೆ ವಾಟ್ಸ್​ಅ್ಯಪ್​ ವರೆಗೂ ತಲುಪಿಬಿಟ್ಟಿತ್ತು.. ನನಗಿನ್ನೂ ನೆನಪಿದೆ ಏಪ್ರಿಲ್​ 30.. ಮಧ್ಯಾಹ್ನ 12.05ಕ್ಕೆ ನಾನು ನಿನ್ನ ಮೊದಲ ಬಾರಿ ಭೇಟಿ ಮಾಡಿದ್ದೆ.. ನನ್ನ ಬರುವಿಕೆಗೆ ಕಾಯ್ತಾ ಇದ್ದ ನೀನು ಬಿಸಿಲಿನ ತಾಪದಿಂದ ಬಚಾವಾಗಲಿ ಮರದ ಕೆಳಗೆ ಇದ್ದ ಕಲ್ಲು ಬೆಂಚ್​ನಲ್ಲಿ ಕುಳಿತಿದ್ದೆ.. ದೂರದಲ್ಲೇ ಬರ್ತಿದ್ದ ನನ್ನ ಬೈಕ್​ ನೋಡಿ ಈತನಿರಬಹುದೋ ಎಂದು ಯೋಚಿಸಿದೆ ಎಂದು ನಾನು ಅಂದುಕೊಂಡೆ.. ಹೆಲ್ಮೆಟ್​ ಧರಿಸಿ ಬರುತ್ತಿದ್ದ ನನ್ನ ಮೊದಲಬಾರಿ ಮುಖತಃ ಭೇಟಿಯಾಗುತ್ತಿರುವ ನಿನಗೆ ಅದು ಸಹಜ ಯೋಚನೆ.. ಪ್ರಥಮ ಭೇಟಿಯ ವೇಳೆ ಅದೆಷ್ಟೊ ಸುಮಧುರ ಮಾತುಕತೆ ಹರಟೆ, ಸಿನಿಮಾ, ಕೊನೆಯಲ್ಲಿ ಐಸ್​ಕ್ರೀಂ.. ತುಂಬಾ ಇಷ್ಟವೂ ಆದೆ ನೀನು.. ಅತ್ಯಂತ ಮರೆಯಲಾಗದ ಘಟನೆ ನೀನೇ ಕೇಳಿ ಪಡೆದ ಆ ಸೆಲ್ಫಿ ಚಿತ್ರ.. ಇಂದಿಗೂ ನನ್ನ ಕಂಪ್ಯೂಟರ್​ನ 'ಪ್ರೇಶಿಯಸ್​' ಇನ್ನೋ ಫೋಲ್ಡರ್​ನಲ್ಲಿ ಭದ್ರವಾಗಿದೆ..
ಆ ಭೇಟಿಯ ಕೊನೆಯಲ್ಲಿ ಮತ್ತೆ ಮುಂದಿನ ತಿಂಗಳು ಸಿಗುವ ಅಂತ ನಾನು ಹೇಳಿದ್ರೆ, ನಿನ್ನ ಕಂಗಳಲಿ ಇದ್ದ ಮಿಂಚು, ಜಿನುಗಿನ ಕಣ್ಣೀರು ಅದೆಷ್ಟು ಪ್ರೀತಿ ಇಟ್ಟಿರುವೆ ನನ್ನ ಮೇಲೆ ಎಂಬುದನ್ನು ಸೂಚಿಸುವಂತಿತ್ತು..

 ಇಷ್ಟರ ಬಳಿಕ ನಾನು ನೀನು ಇಡೀ ವರ್ಷದಲ್ಲಿ ಮತ್ತೆ 3 ಬಾರಿ ಭೇಟಿಯಾದ್ವಿ. ಪ್ರತೀ ಭೇಟಿಯೂ ಸಂತಸ ಸಂಭ್ರಮ ಸ್ನೇಯಮಯವಾಗಿತ್ತು.. ನನ್ನ ಮನಸು ನಿನಗಾಗಿ ಹಾತೊರೆಯುತ್ತಿದೆ ಅನ್ನೋದು ನಿನಗೆ ತಿಳಿದಿತ್ತು..

 ಹೌದು ನನಗೆ ನೀನು ನನ್ನ ಮನದ ದೇವತೆಯೇ ಆಗಿದ್ದೆ.. ನಾನು ಆ ಹೊತ್ತಿಗಾಗಲೇ ನಿನಗಾಗಿ ಬದುಕಲು ಪ್ರಾರಂಭಿಸಿದ್ದೆ. ನಿನ್ನ ಇಷ್ಟ ಕಷ್ಟಗಳು ನಡುವೆ ನನ್ನ ಬಯಕೆಗಳನ್ನೇ ಮರೆತಿದ್ದೆ.. ನಿಜ ನಿನ್ನ ಬಿಟ್ಟು ಜೀವನ ಇಲ್ಲ ಅನ್ನೋದು ಮನಸಿಗೆ ಬಂದಿತ್ತು..
ಆದರೆ ಅದ್ಯಾರ ಕಣ್ಣು ಬಿತ್ತೋ.. ಅದ್ಯಾರು ನನ್ನ ಬಗ್ಗೆ ಏನು ಹೇಳಿದ್ರೋ.. ನನ್ನ ವ್ಯಕ್ತಿತ್ವವನ್ನೇ ಅನುಮಾನಿಸತೊಡಗಿದೆ.. ಪ್ರೀತಿಯ ಬಟ್ಟಲಲಿ ಶಂಕೆಯ ಕಲ್ಲು ಬಿದ್ದಿತ್ತು. ನನ್ನ ಬದುಕಲಿ ಅದೆಷ್ಟೋ ಲಲನೆಯರು ಬಂದು ಹೋಗಿದ್ದಾರೆಂಬಂತೆ ನನ್ನ ನೋಡತೊಡಗಿದೆ.. ನನ್ನಲಿ ಎಲ್ಲವೂ ನಿನಗೆ ಆಕ್ಷೇಪಾರ್ಹವೇ ಆಗತೊಡಗಿತು.. ಇಷ್ಟಾದರೂ ನನಗೆ ನಿನ್ನ ಮೇಲಿನ ಒಲುಮೆ ಪ್ರೀತಿ ಕುಗ್ಗಿಲ್ಲ.. ಆದ್ರೆ ಅದನ್ನು ತೋರ್ಪಡಿಸುವುದನ್ನು ನಿಲ್ಲಿಸದೇ ನನಗೆ ಬೇರೆ ದಾರಿಯೇ ಇರಲಿಲ್ಲ..

 ಪ್ರೀತಿಸುವ ಹೃದಯಗಳ ಮಧ್ಯೆ 'EGO' ಇರಬಾರದು.. ಅನುಮಾನವಂತೂ ಸುಳಿಯಲೇಬಾರದು.. ಬಹುಷಃ ನಾನು ನಿನ್ನನ್ನು ಇಷ್ಟಪಟ್ಟಷ್ಟು ಸ್ವತಃ ನನ್ನನ್ನೇ ಇಷ್ಟ ಪಟ್ಟಿಲ್ಲ ಅನ್ನಿಸುತ್ತೆ.. ಇದು ನಿನ್ನ ಕಣ್ಣಿಗೆ ಕಾಣಲೇ ಇಲ್ಲ.. ಅನುಮಾನದ ಸುಳಿಗೆ ಬಿದ್ದು ನನ್ನ ದೂರದವನಂತೆ ನೋಡತೊಡಗಿದೆ. ನಿನ್ನ ಪ್ರತಿ ಕಟುನುಡಿಗೆ ನನ್ನ ಮನ ಮೌನಿಯಾಗತೊಡಗಿತು. ಕಟ್ಟಿದ್ದ ಪ್ರೇಮಸೌಧ ನಿನ್ನ ಕಟು ಮಾತಿನ ಭೂಕಂಪನಕೆ ಕುಸಿದುಬಿತ್ತು...

 ಕುಸಿದ ಒಲವ ಗೋಪುರದಡಿ ಸಿಲುಕಿ ನರಳುತ್ತಿರುವ ನಾನು ಇಂದಿಗೂ ಹೇಳುತ್ತಿರುವುದಿಷ್ಟೇ.. ನೀನೆಂದೂ ನಿಜವಾದ ನನ್ನ ನೋಡೇ ಇಲ್ಲ...!! 

No comments:

Post a Comment